ಕಾರ್ದೊವಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಅರ್ಜೆಂಟೀನದ ಒಂದು ನಗರ ಮತ್ತು ಅದೇ ಹೆಸರಿನ ಪ್ರಾಂತ್ಯದ ಮುಖ್ಯಪಟ್ಟಣ. ಜನಸಂಖ್ಯೆ 5,89,153(1960). ಸಮುದ್ರ ಮಟ್ಟಕ್ಕಿಂತ 1,440' ಎತ್ತರದಲ್ಲಿದೆ. ಜೆರೊನಿಮೊ ಲೂಯಿ ಡಿ ಕಾಬ್ರೆರ 1573ರಲ್ಲಿ ಇದನ್ನು ಸ್ಥಾಪಿಸಿದ. ಜೆಸುಯಿಟರು 1613ರಲ್ಲಿ ಇಲ್ಲಿ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಅಂದಿನಿಂದ ಇದು ದಕ್ಷಿಣ ಅಮೆರಿಕದ ಸಾಂಸ್ಕøತಿಕ ಕೇಂದ್ರವಾಯಿತು. ರೊಸಾರಿಯೊ ಮತ್ತು ಕಾರ್ದೊವಾಗಳ ನಡುವೆ ಕಾರ್ದೊವಾದ ಅಧ್ಯಕ್ಷ ಡೊಮಿಂಗೋ ಮಿಯೆಂಟೊ ರೈಲುಹಾದಿ ಹಾಕಿಸಿ ವ್ಯಾಪಾರಾಭಿವೃದ್ಧಿಗೆ ಅನುಕೂಲ ಮಾಡಿದ. 1955ರಲ್ಲಿ ಕಾರ್ದೊವಾವನ್ನು ಜನರಲ್ ಎಡ್ವರ್ಡೊ ಲೊನಾರ್‍ಡಿ ವಸಪಡಿಸಿಕೊಂಡ. ಅರ್ಜೆಂಟೀನದ ಅಧ್ಯಕ್ಷ ವಾನ್ ಪೆರಾನನನ್ನು ಪದಚ್ಯುತನನ್ನಾಗಿ ಮಾಡಿದ. ಹಳೆಯ ನಗರದಲ್ಲಿ ಹಿಂದಿನ ವೈಸ್‍ರಾಯಿಯ ಅರಮನೆಯೂ ಜೆಸುಯಿಟರ ಹಳೆಯ ಚರ್ಚೂ ಇವೆ. ಪ್ಲಾeóÁ ಸಾನ್ ಮಾರ್ಟಿನ್ ಅರ್ಜೆಂಟೀನದ ಸ್ವಾತಂತ್ರ್ಯ ಸ್ಮಾರಕ, ಹೊಸ ನಗರ ಚೌಕಾಕಾರದಲ್ಲಿ ನಿರ್ಮಿತವಾಗಿದೆ. ಇಲ್ಲಿ ಗಣಿ ಉದ್ಯಮದ ತಾಂತ್ರಿಕ ಶಾಲೆ, ಕೃಷಿ ಕಾಲೇಜು, ಖಗೋಳ ವೀಕ್ಷಣಾಲಯ ಮತ್ತು ಕಾರ್ಖಾನೆಗಳು ಇವೆ. ರಿಯೊಪ್ರಿಮಿರೊ ನದಿಗೆ ಅಡ್ಡಲಾಗಿ ಕಟ್ಟಲಾದ ಡಿಕ್ ಸಾನ್ ರಾಕ್ ಕಟ್ಟೆಯ ಜಲಾಶಯದಿಂದ ನಗರಕ್ಕೆ ನೀರಿನ ಸರಬರಾಯಿ ಆಗುತ್ತದೆ. ಇದು ದಕ್ಷಿಣ ಅಮೆರಿಕದಲ್ಲಿ ಅತಿ ದೊಡ್ಡದಾದ ಕಟ್ಟೆ; ನೀರಾವರಿ ಸೌಲಭ್ಯದ ಜೊತೆಗೆ ಕಾರ್ಖಾನೆಗಳಿಗೆ ಅಗತ್ಯವಾದ ವಿದ್ಯುತ್ತನ್ನೂ ಒದಗಿಸುತ್ತಿದೆ. ಕಾರ್ದೊವಾದಿಂದ ಇತರ ಮುಖ್ಯ ಸ್ಥಳಗಳಿಗೆ ರಸ್ತೆ, ರೈಲ್ವೆ ಮತ್ತು ವಿಮಾನ ಸಂಪರ್ಕಗಳಿವೆ.

 ಕಾರ್ದೊವಾ ಪ್ರಾಂತ್ಯದ ವಿಸ್ತೀರ್ಣ 65,161 ಚ. ಮೈ. ಜನಸಂಖ್ಯೆ 17,59,997 (1960). ಇದು ಅರ್ಜೆಂಟೀನದ ಮಧ್ಯಪ್ರಾಂತ್ಯ. ಬೊಲಿವಿಯ ಮತ್ತು ಚಿಲಿಯೊಡನೆ ಇದರ ವ್ಯಾಪಾರ ಅಭಿವೃದ್ಧಿಯಾದಂತೆ 16ನೆಯ ಶತಮಾನದಲ್ಲಿ ಕಾರ್ದೊವಾ ಅಸ್ತಿತ್ವಕ್ಕೆ ಬಂತು. 1852-62ರಲ್ಲಿ ಬ್ಯೂನಸ್ ಏರಿಸಿನ ಆಳ್ವಿಕೆಗೆ ಎದುರಾಗಿ ಅರ್ಜೆಂಟೀನ ಒಕ್ಕೂಟಕ್ಕೆ ಇದು ಬೆಂಬಲವಿತ್ತಿತು. ಸಮುದ್ರಮಟ್ಟಕ್ಕಿಂತ 9,462'  ಎತ್ತರವಿರುವ ಸಿರಾಸ್ ಡಿ ಕಾರ್ದೊವಾ ಪರ್ವತವೇ ಇದರ ಪಶ್ಚಿಮದ ಎಲ್ಲೆ. ಪಂಚನದಿಗಳು ಈ ಪರ್ವತದಲ್ಲಿ ಹುಟ್ಟಿ ಪೂರ್ವದ ಕಡೆಯ ಇಳಿಜಾರಿನಲ್ಲಿ ಹರಿಯುತ್ತವೆ. ಸಹ್ಯವಾದ ಚಳಿಗಾಲವೂ ಶಾಖದಿಂದ ಕೂಡಿದ ಬೇಸಗೆಯೂ ಕಾಣಬರುತ್ತವೆ. ನವೆಂಬರ್ ಮತ್ತು ಫೆಬ್ರವರಿ ತಿಂಗಳುಗಳ ನಡುವೆ ಮಳೆ ಬೀಳುತ್ತದೆ. ಅರಣ್ಯಗಳಿಂದಲೂ ಹುಲ್ಲುಗಾವಲಿನಿಂದಲೂ ಕೂಡಿರುವ ಈ ಪ್ರದೇಶ ಪ್ರವಾಸಿಗರ ಆಕರ್ಷಣೆ. ಗೋದಿ, ಬಾರ್ಲಿ, ಓಟ್ಸ್, ಆಲ್ಫಾಲ್ಫ ಇಲ್ಲಿಯ ಮುಖ್ಯ ಬೆಳೆಗಳು. ಪಶುಪಾಲನೆಯೂ ಮುಖ್ಯ ಕಸಬಾಗಿದೆ. ಸುಣ್ಣಕಲ್ಲು, ಗ್ರಾಫೈಟ್, ಅಭ್ರಕ ಮತ್ತು ಬೆರಿಲಿಯಂ ಸಿಗುತ್ತವೆ. ಕಾರ್ದೊವಾ, ರಿಯೋಕಾಟಿ ಮತ್ತು ವಿಲಮರಿಯಾ ಮುಖ್ಯ ಕೈಗಾರಿಕಾ ಕೇಂದ್ರಗಳು. ಆಲ್ಪಾ ಗ್ರೇಸಿಯಾ ಕೊಸ್ಕಿನ್, ಲ ಕಂಬ್ರೆ, ಕಪಿಲ ಡೆಲ್ ಮಾಂಟೆ ಮತ್ತು ಲ ಫಾಲ್ಡ ಮುಖ್ಯ ಪ್ರವಾಸಿ ಕೇಂದ್ರಗಳು.

(ಬಿ.ಎಸ್.ಎಚ್.)